ಸಿಂಧೂ - ಗಂಗಾ ಮೆಕ್ಕಲು

	ಭಾರತ ಪರ್ಯಾಯದ್ವೀಪಭಾಗ ಮತ್ತು ಹಿಮಾಲಯ ಪರ್ವತ ಪ್ರದೇಶಗಳ ಮಧ್ಯೆ ಇರುವ ಬಯಲಿನ, ಸಿಂಧೂ-ಗಂಗಾ ಮತ್ತು ಅವುಗಳ ಉಪನದಿಗಳು ಸಂಗ್ರಹಿಸಿದ ಮೆಕ್ಕಲು (ಇಂಡೊ-ಗ್ಯಾಂಜಿಟಿಕ್ ಅಲ್ಯೂವಿಯಮ್). ಭೂವೈe್ಞÁನಿಕ ರೀತ್ಯ ಬ್ರಹ್ಮಪುತ್ರಾ ಮೆಕ್ಕಲನ್ನೂ ಇದೇ ಸಮೂಹದಲ್ಲಿ ಸೇರಿಸುವುದುಂಟು. ಏಕೆಂದರೆ ಗಂಗಾ, ಸಿಂಧೂ, ಬ್ರಹ್ಮಪುತ್ರಾ ನದಿಗಳ ಮೆಕ್ಕಲು ಅರಬ್ಬೀ ಸಮುದ್ರ ತೀರದ ಸಿಂಧ್ ಪ್ರಾಂತ್ಯದಿಂದ ಉತ್ತರ ರಾಜಸ್ತಾನ, ಪೂರ್ವ ಮತ್ತು ಪಶ್ಚಿಮ ಪಂಜಾಬ್, ಉತ್ತರ ಪ್ರದೇಶ, ಬಿಹಾರ್, ಪೂರ್ವ ಮತ್ತು ಪಶ್ಚಿಮ ಬಂಗಾಲ ಮತ್ತು ಅಸ್ಸಾಮ್ ಪ್ರಾಂತ್ಯದಲ್ಲಿ ಸುಮಾರು ಅರ್ಧಭಾಗ ಸೇರಿ, ಬಂಗಾಲ ಕೊಲ್ಲಿಯ ತೀರದವರೆಗೂ ಒಂದಕ್ಕೊಂದು ಕೂಡಿಕೊಂಡು ವ್ಯಾಪಿಸಿವೆ. ಈ ಮೆಕ್ಕಲುಮಣ್ಣಿನಿಂದ ಒಡಗೂಡಿದ ಬಯಲಿನ ಉದ್ದ ಸು. 2400ಕಿಮೀ, ಅಗಲ ಸು. 128-400ಕಿಮೀ. ಗಂಗಾ-ಸಿಂಧೂ ನದಿಗಳ ವ್ಯವಸ್ಥೆಯನ್ನು ಪ್ರತ್ಯೇಕಿಸುವ ಜಾಗದಲ್ಲಿ ಅಂದರೆ, ಸಟ್ಲೆಜ್ (ಶತದ್ರು) ಮತ್ತು ಯಮುನಾ ನದಿಗಳ ಮಧ್ಯೆ, ಅಂಬಾಲ ಬಳಿ ಈ ಬಯಲು ಪ್ರದೇಶದ ಗರಿಷ್ಠ ಎತ್ತರ 274ಮೀ. ಇಲ್ಲಿಂದ ಮುಂದೆ ಸಮುದ್ರಗಳ ಕಡೆಗೆ ಎರಡು ಪಾಶ್ರ್ವಗಳಲ್ಲೂ ಕ್ರಮೇಣ ಇಳಿಜಾರಾಗುತ್ತ ಬಂದು ಸಿಂಧ್ ಮತ್ತು ಬಂಗಾಲದ ನದೀಮುಖಜಭೂಮಿ ಪ್ರದೇಶಗಳ ಅಂತ್ಯದಲ್ಲಿ ಸಮುದ್ರಮಟ್ಟಕ್ಕೆ ಇಳಿಯುತ್ತದೆ. 

	ರಾಜಸ್ತಾನದ ಕೆಲವು ಭಾಗಗಳಲ್ಲಿರುವ ಮರುಭೂಮಿಯನ್ನು ಬಿಟ್ಟರೆ ಈ ಮೆಕ್ಕಲು ಬಯಲಿನ ಉಳಿದ ಭಾಗಗಳೆಲ್ಲ ಹೆಚ್ಚು ಫಲವತ್ತಾಗಿವೆ. ಇಲ್ಲಿ ಜನಸಾಂದ್ರತೆ ವಿಪುಲ. ಭಾರತ ಮತ್ತು ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಜನ ಈ ಬಯಲಿನಲ್ಲಿ ವಾಸಿಸು ತ್ತಾರೆ. ಈ ಪ್ರದೇಶದಲ್ಲಿ ಭಾರತದ ಅನೇಕ ಸಾಂಸ್ಕøತಿಕ ಮತ್ತು ಐತಿಹಾಸಿಕ ಮಹಾಘಟನೆಗಳು ಜರಗಿವೆ. ಮೊಹೆಂಜೊದಾರೊ ಮತ್ತು ಹರಪ್ಪ ಎಂಬ ಪ್ರಾಚೀನ ನಗರಗಳು, ಪ್ರವಾಹದಲ್ಲಿ ಕೊಚ್ಚಿ ಬಂದ ಮಣ್ಣಿನಲ್ಲಿ ಹೂತುಹೋಗಿವೆ. ವೇದಗಳ ಕಾಲದಲ್ಲಿ ಪವಿತ್ರ ನದಿಯೆಂದು ವರ್ಣಿಸಲ್ಪಟ್ಟ ಸರಸ್ವತೀನದಿ ಒಂದು ಸಣ್ಣ ತೊರೆಯಂತೆ ಹರಿದು ಬೀಕಾನೆರ್ ಮರಳುಗಾಡಿನಲ್ಲಿ ಇಂಗಿಹೋಗಿದೆ ಎನ್ನಲಾಗಿದೆ. ಸರಸ್ವತಿ ನದಿಯ  ಉದ್ದದ ದಡಗಳಲ್ಲಿ, ಹೆಚ್ಚಿನ ಸಂಖ್ಯೆಯ ದಿಬ್ಬಗಳಲ್ಲಿ ಮೊಹೆಂಜೊದಾರೋ ಮತ್ತು ಅನಂತರ ಬಂದ ನಾಗರಿಕತೆಯ ಕುರುಹುಗಳಾಗಿ ದೇವಸ್ಥಾನ, ವಾಸಗೃಹಗಳು ಹಾಗೂ ಮತ್ತಿತರ ಪದಾರ್ಥಗಳು ಅಲ್ಲಿ ನಡೆದ ಉತ್ಖನನದಿಂದ ದೊರಕಿವೆ. 

	ಸಿಂಧೂ, ಗಂಗಾ, ಬ್ರಹ್ಮಪುತ್ರಾ ನದಿಗಳು ಹಾಗೂ ಅವುಗಳ ಉಪನದಿಗಳು ಈ ಮೆಕ್ಕಲು ಬಯಲಿನಲ್ಲಿ ಪ್ರವಹಿಸುವಾಗ ಅವುಗಳ ಪಾತ್ರಗಳಲ್ಲಿ ಆಗಾಗ್ಗೆ ವಿಶೇಷ ಬದಲಾವಣೆಗಳಾಗುತ್ತವೆ. ಈ ನದಿಗಳು ಪರ್ವತ ಪ್ರದೇಶಗಳಿಂದ ಅಪಾರ ಮಣ್ಣನ್ನು ವರ್ಷೇ ವರ್ಷೇ ಸಂತತವಾಗಿ ತಂದು ತಮ್ಮ ದಡಗಳಲ್ಲಿ ಹರಡುತ್ತವೆ. ಕಾಲ ಕ್ರಮೇಣ ಆ ನದೀತಲಗಳು ಮೆಕ್ಕಲಿನಿಂದ ತುಂಬಿಹೋಗಿ ಸುತ್ತುಮುತ್ತಲ ಪ್ರದೇಶದ ಮಟ್ಟಕ್ಕೆ ಏರುವುದುಂಟು. ಹೀಗೆ ನೆಲದಲ್ಲಿ ಆಗುವ ಮಟ್ಟ ವ್ಯತ್ಯಾಸಗಳಿಂದ ನದಿಗಳು ತಮ್ಮ ಮಾರ್ಗವನ್ನು ಪದೇ ಪದೇ ಬದಲಾಯಿಸುತ್ತವೆ. ಸಿಂಧೂ ಗಂಗಾ ಮೆಕ್ಕಲು ಬಯಲುಗಳಲ್ಲಿ ಆಗುವಷ್ಟು ಬದಲಾವಣೆಗಳು ದಖನ್ನಿನ ನದಿಗಳ ಮಾರ್ಗಗಳಲ್ಲಿ ಇಲ್ಲ. 

	ಸಿಂಧೂ-ಗಂಗಾ ಮೆಕ್ಕಲನ್ನು ಪ್ರಾಚೀನ (ಓಲ್ಡರ್) ಮತ್ತು ನವೀನ (ನ್ಯೂಯರ್) ಮೆಕ್ಕಲು ಎಂದು ವಿಂಗಡಿಸಲಾಗಿದೆ. ಉತ್ತರ ಪ್ರದೇಶದ ಗಂಗಾ ಬಯಲಿನಲ್ಲಿ ಪ್ರಾಚೀನ ಮೆಕ್ಕಲಿಗೆ ಭಂಗರ್ ಎಂದು ಹೆಸರು. ಇದರ ಬಣ್ಣ ನೀಲಿ ಇಲ್ಲವೆ ಕಪ್ಪು. ಇದರಲ್ಲಿ ಕಂಕರ್ ಎಂಬ ಹೆಸರಿನ ಅಶುದ್ಧ ಸುಣ್ಣಕಲ್ಲಿನ ಹಳಕುಗಳು ಇವೆ. ಪ್ರಾಚೀನ ಮೆಕ್ಕಲು ಸಾಮಾನ್ಯ ವಾಗಿ ಈಗಿನ ಪ್ರವಾಹಮಟ್ಟಕ್ಕೆ ಮೇಲ್ಭಾಗದಲ್ಲಿ ಸಂಗ್ರಹವಾಗಿರುವುದು ಕಾಣುತ್ತದೆ. ಪಂಜಾಬ್ ಪ್ರದೇಶದಲ್ಲಿ ನವೀನ ಮೆಕ್ಕಲಿಗೆ ಖಾದರ್ ಎಂದು ಹೆಸರು. ನವೀನ ಮೆಕ್ಕಲಿನ ಬಣ್ಣ ಪ್ರಾಚೀನ ಮೆಕ್ಕಲಿನದಕ್ಕಿಂತ ತೆಳು. ಇದರಲ್ಲಿ ಕಂಕರ್ ಪ್ರಮಾಣ ಕಡಿಮೆ. ಮರಳು ಮತ್ತು ಗ್ರಾವೆಲ್‍ನಿಂದ ಕೂಡಿದ ಮಸೂರಾಕಾರದ ಪ್ರಸ್ತರಗಳಿವೆ. ಕೆಲವೆಡೆ ಪೀಟ್ ಕಂದು ಕಲ್ಲಿದ್ದಲು ಕೂಡ ಸಿಕ್ಕುತ್ತದೆ. ಪ್ರಾಚೀನ ಮೆಕ್ಕಲಿನ ಕಾಲವನ್ನು ಪ್ಲೀಸ್ಟೊಸೀನ್ ಕಲ್ಪದ ಮಧ್ಯಭಾಗದಿಂದ ಮೇಲ್ಭಾಗದವರೆಗೆ ಎಂದು ಪರಿಗಣಿಸಲಾಗಿದೆ. ಈ  ಮೆಕ್ಕಲಿನಲ್ಲಿ  ನಾಮಾವಶೇಷವಾಗಿರುವ  ಖಡ್ಗಮೃಗ, ಆನೆ, ಕುದುರೆ  ಮುಂತಾದ ಜಾತಿಯ ಪೂರ್ವವಂಶೀಯ ಪ್ರಾಣಿಗಳ ಅವಶೇಷಗಳು ಸಿಕ್ಕಿವೆ. ನವೀನ ಮೆಕ್ಕಲಿನ ಕಾಲ, ಮೇಲಣ ಪ್ಲೀಸ್ಟೊಸೀನ್ ಕಲ್ಪದಿಂದ ಈಗಿನ ಕಾಲದ ತನಕ ವ್ಯಾಪಿಸಿದೆ. ಈ ಮೆಕ್ಕಲಿನಲ್ಲಿ ದೊರೆಯುವ ಅವಶೇಷಗಳು ಈಗಿನ ಕಾಲದ ಪ್ರಾಣಿಗಳ ವಂಶಗಳಿಗೆ ಸೇರಿದವು. ಮಾನವನ ಅಸ್ಥಿಶೇಷಗಳೂ ಅವನ ಜೀವನಕ್ಕೆ ಸಂಬಂಧಪಟ್ಟ ಸಾಮಗ್ರಿಗಳ ಅವಶೇಷಗಳೂ ಇದರಲ್ಲಿ ದೊರೆತಿವೆ. 

	ಸಿಂಧೂ-ಗಂಗಾ ಮೆಕ್ಕಲು ಸಂಗ್ರಹದ ತಳದಲ್ಲಿ ಭೂರಚನೆ ಅಭಿನತೀಯ ಜೋಗುಣಿಯಂತೆ (ಸಿನ್‍ಕ್ಲೈನಲ್ ಬೇಸಿನ್) ಇದೆ. ಇದರ ಉತ್ಪತ್ತಿ ಹೇಗೆ ಎಂಬ ವಿಷಯ ಖಚಿತವಾಗಿ ತಿಳಿದಿಲ್ಲ. ಎಡ್ವರ್ಡ್ ಸೂಯೆಸ್ ಎಂಬ ಭೂವಿe್ಞÁನಿಯ ಪ್ರಕಾರ ಹಿಮಾಲಯ ಪರ್ವತ ಪ್ರದೇಶದಲ್ಲಿ ಟೆತಿಯನ್ ಅವಸಾನದ (ಟೆತಿಯನ್ ಸೆಡಿಮೆಂಟ್) ಅಂದರೆ, ಪುರಾತನ ಕಾಲದ ಗತಿಸಿಹೋದ ಟೆತಿಸ್ ಸಮುದ್ರದ ಜಲಜ ಶಿಲೆಗಳು ಭಾರತದ ಪರ್ಯಾಯದ್ವೀಪದ ಕಡೆಗೆ ಎತ್ತಿ ನೂಕಲ್ಪಟ್ಟು ಹಿಮಾಲಯ ಪರ್ವತಗಳು ಉದ್ಭವಿಸಿದಾಗ ಈ ಶ್ರೇಣಿಗಳ ಮುಂದೆ ಉಂಟಾದ ಮುನ್‍ಕಂದರ (ಘೋರ್ ಡೀಪ್) ರೂಪುಗೊಂಡಿತ್ತು. ಭಾರತದ ಪರ್ಯಾಯದ್ವೀಪ ಭಾಗ ಸ್ಥಿರವಾಗಿರುವ ಭದ್ರಭೂಭಾಗವೆಂದೂ ಮಧ್ಯ ಏಷ್ಯ ಎಂದರೆ, ಟೆತಿಸ್ ಸಮುದ್ರ ಶಿಲಾಭಾಗಗಳ ಪ್ರದೇಶ ಚಲಿಸುವ ಭೂಭಾಗವೆಂದೂ ಈತನ ಅಭಿಪ್ರಾಯವಾಗಿತ್ತು. ಸರ್ವೆ ಆಫ್ ಇಂಡಿಯ ಸಂಸ್ಥೆಯ ಮುಖ್ಯಾಧಿಕಾರಿಯಾಗಿದ್ದವರೊಬ್ಬರು ಈ ಬೋಗುಣಿ ಭಾರಿ ಪ್ರಸ್ತರ ಭಂಗಗಳ ಸಲುವಾಗ ಉಂಟಾದ ಬಿರುಕಿನ ಕಣಿವೆ  (ರಿಫ್ಟ್ ವ್ಯಾಲಿ) ಎಂದು ಅಭಿಪ್ರಾಯಪಟ್ಟಿದ್ದರು. ಭಾರತ ಪರ್ಯಾಯದ್ವೀಪ ಗಟ್ಟಿಯಾದ ಭಾಗವಾದರೂ ಈ ಭೂಭಾಗವೇ ಸಮಗ್ರವಾಗಿ ಕ್ರಮೇಣ ಉತ್ತರಕ್ಕೆ ಸಾಗುತ್ತ, ಟೆತಿಸ್ ಸಾಗರದಲ್ಲಿ ಸಂಗ್ರಹವಾಗಿದ್ದ ಮೆದು ಜಲಜ ಶಿಲಾಸಮುದಾಯದ ಕಡೆಗೆ ನೂಕಲ್ಪಟ್ಟು, ಕಾಲಕ್ರಮದಲ್ಲಿ ಆ ಜಲಜ ಶಿಲೆಗಳು ಮುದುರಿ ಮೇಲಕ್ಕೆ ಎತ್ತಲ್ಪಟ್ಟು, ಹಿಮಾಲಯ ಪರ್ವತ ಶ್ರೇಣಿ ಉತ್ಪನ್ನವಾಗಿದೆ; ಈ ಪರ್ವತ ಶ್ರೇಣಿಗೂ ಗಟ್ಟಿಯಾದ ಪರ್ಯಾಯ ದ್ವೀಪಭಾಗಕ್ಕೂ ಮಧ್ಯೆ ಆಳವಾಗಿ ನೆಲ ತಗ್ಗಿರುವುದರಿಂದ ಅದು ಸಿಂಧೂ-ಗಂಗಾ ಬೋಗುಣಿ ಪ್ರದೇಶ ಆಗಿ ಪರಿಣಮಿಸಿದೆ. ಇದು ಮೇಲಣ ಇಯೊಸೀನ್ ಕಲ್ಪದಲ್ಲಿ ಆಕಾರ ತಳೆಯಲು ಪ್ರಾರಂಭಗೊಂಡು ಹಿಮಾಲಯ ಪರ್ವತಗಳ ನಿರ್ಮಾಣ ಮೂರನೆಯ ಮಜಲಿನ ಮಧ್ಯದ ಮಯೊಸೀನ್ ಕಲ್ಪದಲ್ಲಿ ಪರಮಾವಧಿ ಆಳ ಹೊಂದಿತ್ತು ಎಂದು ಕೆಲವು ಭಾರತೀಯ ಹಾಗೂ ಭಾರತೇತರ ಭೂವಿe್ಞÁನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲಿಂದೀಚೆಗೆ ಬೋಗುಣಿ ಪ್ರದೇಶದಲ್ಲಿ ಮೆಕ್ಕಲು ಸಂಗ್ರಹವಾಗಿ ಇಡೀ ಪ್ರದೇಶ ಬಯಲಿನಂತೆ ಇದೆ. 

	ಸಿಂಧೂ-ಗಂಗಾ ಮೆಕ್ಕಲುಮಣ್ಣಿನ ಮಂದದ ಬಗ್ಗೆ ಅನೇಕ ಊಹಾಪೋಹಗಳಿದ್ದುವು. ಮೆಕ್ಕಲು ಬಯಲಿನ ದಕ್ಷಿಣ ಭಾಗಗಳಲ್ಲಿ ಅಂದರೆ, ದಖನ್ನಿನ ಕಡೆಗೆ ಆಳ ಕಡಿಮೆಯಾಗುತ್ತದೆ. ಉತ್ತರಕ್ಕೆ ಸರಿದಂತೆಲ್ಲ ಆಳ ಹೆಚ್ಚುತ್ತ ಹೋಗಿ ಹಿಮಾಲಯ ಶ್ರೇಣಿಗಳ ಕಡೆಗೆ ಗರಿಷ್ಠ ಮಂದ ಪಡೆಯುತ್ತದೆ. ಬೇಸಿನ್ ಅಧಿಕ ಭಾಗ ಮೆಕ್ಕಲು ಮಣ್ಣಿನಿಂದ ಮಾತ್ರವಲ್ಲದೆ, ಆಳದಲ್ಲಿ ಅನೇಕ ಯುಗಗಳ ಶಿಲಾ ಪ್ರಸ್ತರ ಗಳಿಂದ ಕೂಡ ಆಗಿರುವುದೆಂದೂ ಅದರಲ್ಲಿ ಸಾಕಷ್ಟು ಏರುಪೇರುಗಳಿವೆಯೆಂದೂ ಈಚಿನ ಪರಿಶೋಧನೆಗಳಿಂದ ಕಂಡುಬಂದಿದೆ. ಈ ಬಯಲಿನಲ್ಲಿ ನಡೆಸಿದ ಭೂಭೌತವೈe್ಞÁನಿಕ ಸರ್ವೇಕ್ಷಣದಿಂದ ಆಳದಲ್ಲಿರುವ ಶಿಲಾಸಮುದಾಯಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿದೆ. ಪಂಜಾಬ್, ಉತ್ತರ ಪ್ರದೇಶ, ಬಿಹಾರ್, ಬಂಗಾಲ ಮತ್ತು ಅಸ್ಸಾಮ್ ಪ್ರಾಂತ್ಯಗಳಲ್ಲಿ ಖನಿಜ ತೈಲಾನ್ವೇಷಣೆಗಾಗಿ ತೋಡಿರುವ ಆಳ ಬಾವಿಗಳ ಸಲುವಾಗಿ ಅಲ್ಲಿಯ ಮೆಕ್ಕಲುಮಣ್ಣಿನ ಆಳ ಸು. 500 ರಿಂದ 1000 ಮೀ. ಎಂದು ಗೊತ್ತಾಗಿದೆ. ಅದರ ಕೆಳಗೆ ಶಿವಾಲಿಕ್ ಇಲ್ಲವೆ ಅದಕ್ಕೆ ಸಮಕಾಲೀನವಾದ ಜಲಜಶಿಲಾ ಸಮುದಾಯಗಳು ಸು. 4000 ಮೀ. ಆಳದವರೆಗೂ ಕೆಲವು ಕಡೆಯಲ್ಲಿ ವ್ಯಾಪಿಸಿರುವುದು ತಿಳಿದುಬಂದಿದೆ. ಈ ಶಿವಾಲಿಕ್ ಶಿಲೆಗಳ ಕೆಳಗೆ ಪ್ರಾಚೀನ ಸಮುದ್ರೋತ್ಪನ್ನ ಶಿಲೆಗಳೂ ಇವೆ. ಕ್ರಿಟೇಷನ್ ಮತ್ತು ಜುರಾಸಿಕ್ ಕಲ್ಪಗಳ ಶಿಲೆಗಳು ಬಂಗಾಲ ಮತ್ತು ಬಿಹಾರ್ ಮುಂತಾದ ಪ್ರದೇಶದಲ್ಲಿಯ ಕೆಲವು ಬಾವಿಗಳಲ್ಲಿ ಸಿಕ್ಕಿವೆ. ಸಿಂಧೂ-ಗಂಗಾ ಮೆಕ್ಕಲು ಬಯಲಿನಲ್ಲಿ  ದೊಡ್ಡ ನದಿಗಳಿಂದ  ಮತ್ತು ನೆಲದೊಳಗಿನಿಂದ ಪಡೆಯಬಹುದಾದ ಜಲಾಶಯ ಸಮೃದ್ಧಿ ಇರುವುದರಿಂದಲೂ ಇಲ್ಲಿಯ ಮಣ್ಣು ಬಲು ಫಲವತ್ತಾಗಿರುವುದರಿಂದಲೂ ಈ ಪ್ರದೇಶ ಕೃಷಿಸಂಪತ್ತಿಗೆ ಪ್ರಾಮುಖ್ಯ ಪಡೆದಿದೆ. ಆರ್ಥಿಕ ದೃಷ್ಟಿಯಿಂದ  ಇಲ್ಲಿಯ ಖನಿಜ ಸಂಪತ್ತು ಕಡಿಮೆ. ಮಣ್ಣಿನ ಪಾತ್ರೆ, ಕಟ್ಟಡ, ರಸ್ತೆಗಳ ನಿರ್ಮಾಣಗಳಿಗೆ ಅಗತ್ಯವಾದ ಜೇಡಿಮಣ್ಣು ಮತ್ತು ಕಂಕರ್ ಸುಣ್ಣಕಲ್ಲು, ಮತ್ತಿತರ ಸಾಮಗ್ರಿಗಳು ಸುಲಭವಾಗಿ ಇಲ್ಲಿ ದೊರೆಯುತ್ತವೆ. ಮೆಕ್ಕಲಿನ ತಳದಲ್ಲಿರುವ ಶಿಲೆಗಳಲ್ಲಿ ಖನಿಜತೈಲಕ್ಕಾಗಿ ನಡೆಯುತ್ತಿರುವ ಪರಿಶೋಧನೆ ಗಳು ಅಸ್ಸಾಮ್ ಪ್ರಾಂತದ ಬ್ರಹ್ಮಪುತ್ರಾ ಬಯಲಿನಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲೂ ಫಲಪ್ರದವಾಗಿವೆ. ಬ್ರಹ್ಮಪುತ್ರಾ ಬಯಲಿನ ಮೆಕ್ಕಲಿನ ಕೆಳಗೆ ನಾಹರ್ ಕಟಿಯ, ಮೊರಾನ್ ಮತ್ತಿತರ ಕ್ಷೇತ್ರಗಳಲ್ಲಿ ಖನಿಜತೈಲ ಮತ್ತು ಅದಕ್ಕೆ ಸಂಬಂಧಿಸಿದ ಅನಿಲಗಳ ಉದ್ಧರಣೆ ನಡೆದಿದೆ.					
		(ಎಮ್.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ